ಹಾಡುಹಗಲೆ ಯಾದಗಿರಿ ಪತ್ರಕರ್ತ ಸಾಗರ ದೇಸಾಯಿ ಕಿಡ್ನಾಪ್
- ಯಾದಗಿರಿ: ಹಾಡಹಗಲೇ ವರದಿಗಾರನ ಅಪಹರಣಲುಂಬಿನಿ ಗಾರ್ಡನ್ ಬಳಿ ಸಿನಿಮೀಯ ರೀತಿಯಲ್ಲಿ ಕೃತ್ಯ — ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಯಾದಗಿರಿ: ನಗರದ ಲುಂಬಿನಿ ಗಾರ್ಡನ್ ಮುಂಭಾಗದಲ್ಲಿ ಹಾಡಹಗಲೇ ವರದಿಗಾರರೊಬ್ಬರನ್ನು ಕಾರಿನಲ್ಲಿ ಅಪಹರಣ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಯಾದಗಿರಿ ನಗರದ ನಿವಾಸಿ ಹಾಗೂ ಪತ್ರಕರ್ತ ಸಾಗರ್ ದೇಸಾಯಿ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕಾರೊಂದು ಅಡ್ಡಗಟ್ಟಿ, ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿಯೇ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ಕಾರು ಹಾಗೂ ಘಟನೆಯ ದೃಶ್ಯಗಳು ಸೆರೆಯಾಗಿವೆ ಎನ್ನಲಾಗಿದ್ದು, ಇದೀಗ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಾದಗಿರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಹರಣಕ್ಕೆ ಯತ್ನಿಸಿದವರು ಯಾರು? ಘಟನೆಗೆ ನಿಖರ ಕಾರಣವೇನು? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.