ಕಲಬುರಗಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಶಹಾಪುರ ತಾಲೂಕ ಕುರುಬ ಸಮಾಜ ಹಾಗೂ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ವತಿಯಿಂದ ನಾಳೆ (ಸೆ.22) ಶಹಾಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷರಾದ ರಾಯಪ್ಪ ಚಲುವಾದಿ ತಿಳಿಸಿದರು.
ಕಲಬುರಗಿ ನಗರದ ಹೈಕೋರ್ಟ್ ವೃತ್ತದ ಬಳಿ ಸೆ.16ರ ರಾತ್ರಿ ಮಹಾನಗರ ಪಾಲಿಕೆ ಸಿಬ್ಬಂದಿಯವರು ಪ್ರತಿಮೆಯನ್ನು ತೆರವು ಗೊಳಿಸಿದ್ದಾರೆ.ಒಬ್ಬ ಜನಪರ ನಾಯಕನಿಗೆ ಯಾವ ರೀತಿ ಸರಕಾರ ಗೌರವ ಕೊಡುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.ಈ ಘಟನೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳ ಪರವಾಗಿ ಕೆಲಸ ಮಾಡಿದ ನಾಯಕರು. ಅಹಿಂದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗೆ ಧ್ವನಿಯಾಗಿದ್ದ ಅವರು ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು