ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬುಟ್ನಾಳ ಗ್ರಾಮದಲ್ಲಿ ಅಪರೂಪದ ರಕ್ಷಾಬಂಧನವೊಂದು ಜರುಗಿದೆ. ಬದುಕಿನ ನೂರರ ಗಡಿ ಮುಟ್ಟಿರುವ ಶತಾಯುಷಿ ಅಣ್ಣ ಶ್ರೀ ಪೀರಪ್ಪ ಹುಲಿಮನಿ ಅವರಿಗೆ, ಅವರ 90 ವರ್ಷದ ಪ್ರೀತಿಯ ತಂಗಿ ಭೀಮಬಾಯಿ ರಾಖಿ ಕಟ್ಟಿ ಸಡಗರ ಸಂಭ್ರಮವಾಗಿತ್ತು
ಸಾಂಪ್ರದಾಯಿಕ ಹಳದಿ ಪೇಟ ತೊಟ್ಟು ಕುಳಿತಿದ್ದ ಅಣ್ಣನಿಗೆ ತಂಗಿ ಆರತಿ ಬೆಳಗಿ, ಸಿಹಿ ತಿನಿಸಿ ರಕ್ಷಾಸೂತ್ರ ಕಟ್ಟಿದಾಗ ಇಡೀ ಕುಟುಂಬಸ್ಥರು ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡರು. ವಯಸ್ಸು ನೂರರ ಹತ್ತಿರ ಬಂದರೂ ಇಳಿವಯಸ್ಸಿನ ಈ ಹಿರಿಯ ಒಡಹುಟ್ಟಿದವರ ಮುಗ್ಧ ಪ್ರೀತಿ ಮತ್ತು ಬಾಂಧವ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಇಬ್ಬರ ಮಕ್ಕಳು, ಮೊಮ್ಮಕ್ಕಳು ಹಾಗೂ ಇಡೀ ಬಂಧು-ಬಳಗದವರು ಹರ್ಷ ವ್ಯಕ್ತಪಡಿಸಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.